ಉಡುಪಿ: ಶಾಲೆ, ಆಸ್ಪತ್ರೆ ಮತ್ತಿತರ ಕಡೆಗಳಿಗೆ ಬಾಂಬ್ ಬೆದರಿಕೆಯ ಇಮೇಲ್‌ಗಳನ್ನು ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಹಮದಾಬಾದ್ ಪೊಲೀಸರು ಚೈನ್ನೈ ಮೂಲದ ಇಂಜಿನಿಯರ್ ಯುವತಿಯನ್ನು ಬಂಧಿಸಿದ್ದಾರೆ.ಇತ್ತೀಚೆಗೆ ಉಡುಪಿಯ ಶಾಲೆಗೆ ಬಂದಿದ್ದ ಬಾಂಬ್ ಬೆದರಿಕೆ ಕರೆಗೆ ಸಂಬಂಧಿಸಿ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಉಡುಪಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.ಜೂನ್ 16 ರಂದು ಉಡುಪಿಯ ವಿದ್ಯೋದಯ ಪವಬ್ಲಿಕ್ ಸ್ಕೂಲ್‌ಗೆ ಹುಸಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಇದರಲ್ಲಿ ‘ನಿಮ್ಮಶಾಲೆಯಲ್ಲಿ ಬಾಂಬ್ ಸ್ಪೋಟಿಸಿದರೆ ಮಕ್ಕಳು ಸಾಯುತ್ತಾರೆ. ಮಕ್ಕಳು ಸತ್ತರೆ ಮಾತ್ರ ಪೋಷಕರು ಪ್ರತಿಭಟನೆ ಮಾಡುತ್ತಾರೆ ಮತ್ತು ಪೊಲೀಸರು ಸರಿಯಾದ ತನಿಖೆ ನಡೆಸಿ ಹೈದರಾಬಾದಿನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತಾರೆ ಎಂದು ಬರೆಯಲಾಗಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.