ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಡೀನ್ ಆಗಿ ಡಾ. ಅನಿಲ್ ಕೆ ಭಟ್ ಅವರನ್ನು ಮೇ 1, 2025 ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಅತುತ್ತಮ ವೈದ್ಯರು, ಶಿಕ್ಷಣ ತಜ್ಞರು ಮತ್ತು ಆಡಳಿತಾಧಿಕಾರಿಯಾಗಿರುವ ಡಾ. ಭಟ್ ಅವರು ಮೂಳೆಚಿಕಿತ್ಸೆ, ಕೈ ಶಸ್ತ್ರಚಿಕಿತ್ಸೆ, ಸಂಶೋಧನೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.
ಈ ನೇಮಕಾತಿ ಬಗ್ಗೆ ಮಾತನಾಡಿದ, ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ‘ಶೈಕ್ಷಣಿಕ, ವೈದ್ಯಕೀಯ ಶುಶ್ರೂಷೆ, ಮತ್ತು ಸಂಶೋಧನೆಯಲ್ಲಿ ಹೆಮ್ಮೆಯ ಪರಂಪರೆಯನ್ನು ಹೊಂದಿರುವ ನಮ್ಮ ಪ್ರಮುಖ ಸಂಸ್ಥೆಗಳಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಒಂದಾಗಿದೆ. ಡಾ. ಅನಿಲ್ ಭಟ್ ಅವರನ್ನು ಡೀನ್ ಆಗಿ ನೇಮಿಸಿರುವುದು, ಶೈಕಣಿಕವಾಗಿ ಮತ್ತು ಸದಾ ಹೊಸತನವನ್ನು ಆಲೋಚಿಸುವ ದೂರದೃಷ್ಟಿಯುಳ್ಳ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ನಮಗಿರುವ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಇವರ ಅಧಿಕಾರದಲ್ಲಿ ಕೆಎಂಸಿ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತನ್ನ ಛಾಪು ಮೂಡಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ಡಾ. ಭಟ್ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಮತ್ತು ಕೆಎಂಸಿ ಮಣಿಪಾಲದಿಂದ (1999) ಮೂಳೆಚಿಕಿತ್ಸೆಯಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಜೊತೆಗೆ ಮೂಳೆಚಿಕಿತ್ಸೆಯಲ್ಲಿ ಡಿಎನ್‌ಬಿ ಪದವಿ ಪಡೆದಿದ್ದಾರೆ. 1999ರಲ್ಲಿ ಕೆಎಂಸಿಯಲ್ಲಿ ವೃತ್ತಿಜೀವನ ಪ್ರಾರಂಭಿಸಿದ ಅವರು ಮೂಳೆಚಿಕಿತ್ಸೆ ವಿಭಾಗದ ಮುಖ್ಯಸ್ಥರು (2014–2019) ಮತ್ತು ಅಸೋಸಿಯೇಟ್ ಡೀನ್ (2019 ರಿಂದ) ಆಗಿ ಕಾರ್ಯನಿರ್ವಹಿಸಿದ್ದಾರೆ. ಹ್ಯಾಂಡ್ ಸರ್ಜರಿ ವಿಭಾಗ ಮತ್ತು ಎಂ.ಸಿ.ಎಚ್. ಹ್ಯಾಂಡ್ ಸರ್ಜರಿ ಅನ್ನು ಪ್ರಾರಂಭಿಸಿದರು. ಭಾರತದ ಮೂರು ಕಡೆಗಳಲ್ಲಿ ಲಭ್ಯವಿರುವ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ತಜ್ಞರಾದ ಡಾ. ಭಟ್ ಮಣಿಕಟ್ಟಿನ ಶಸ್ತ್ರಚಿಕಿತ್ಸೆ, ಆರ್ತ್ರೋಸ್ಕೋಪಿ, ಜನ್ಮಜಾತ ವಿರೂಪ ತಿದ್ದುಪಡಿ ಮತ್ತು AI-ಸಂಯೋಜಿತ ಸೋಂಕುಗಳನ್ನು ಪತ್ತೆಹಚ್ಚುವ ಸಂಶೋಧನೆಗಳ ನೇತೃತ್ವ ವಹಿಸಿದ್ದರು. ಭಾರತೀಯರಿಗಾಗಿ ಹಲವಾರು ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು 14 ಆಂಥ್ರೊಪೊಮೆಟ್ರಿಕ್ ಡೇಟಾಸೆಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹುಟ್ಟಿನಲ್ಲಿ ಸಂಭವಿಸಿದ ಕೈ ವೈಕಲ್ಯತೆಗಾಗಿ ರಾಷ್ಟ್ರೀಯ ನೋಂದಾವಣೆಯನ್ನು ಪ್ರಾರಂಭಿಸಿದರು ಮತ್ತು ‘ಹಸ್ತಾ: ಸೆಂಟರ್ ಫಾರ್ ಕಂಜೆನಿಟಲ್ ಹ್ಯಾಂಡ್ ಡಿಫರೆನ್ಸಸ್’ ಮೂಲಕ ಕೃತಕ ಅಂಗ ಕೇಂದ್ರದಲ್ಲಿ 3D ಮುದ್ರಣ ಪ್ರಾಸ್ಥೆಟಿಕ್ಸ್ ಸೌಲಭ್ಯವನ್ನು – ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ರಚಿಸಿದ್ದಾರೆ.
ಡಾ. ಭಟ್ ಅವರು 130 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ, ಜರ್ನಲ್ ಆಫ್ ಆರ್ತ್ರೋಪೆಡಿಕ್ ಟ್ರಾಮಾ ಅಂಡ್ ರೀಕನ್ಸ್ಟ್ರಕ್ಷನ್‌ನ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಜರ್ನಲ್ ಆಫ್ ಹ್ಯಾಂಡ್ ಸರ್ಜರಿ (ಏಷ್ಯಾ ಪೆಸಿಫಿಕ್) ಮತ್ತು ಆನಲ್ಸ್ ಆಫ್ ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಜಾಗತಿಕ ಜರ್ನಲ್‌ಗಳಲ್ಲಿ ಸಂಪಾದಕೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು 41 ಸ್ನಾತಕೋತ್ತರ ಪ್ರಬಂಧಗಳು ಮತ್ತು 7 ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಮತ್ತು ಇಂಡಿಯನ್ ಸೊಸೈಟಿ ಫಾರ್ ಸರ್ಜರಿ ಆಫ್ ದಿ ಹ್ಯಾಂಡ್ (ISSH) ನ ಪ್ರಮುಖ ಸದಸ್ಯರಾಗಿ ರಾಷ್ಟ್ರೀಯ ಪಠ್ಯಕ್ರಮಕ್ಕೆ ಕೊಡುಗೆ ನೀಡಿದ್ದಾರೆ. ಅವರ ಪುಸ್ತಕ, CASES ಇನ್ ಆರ್ತ್ರೋಪೆಡಿಕ್ಸ್, ವ್ಯಾಪಕವಾಗಿ ಬಳಸಲಾಗುವ ಶೈಕ್ಷಣಿಕ ಸಂಪನ್ಮೂಲವಾಗಿದೆ.
ಐಎಫ್‌ಎಸ್‌ಎಸ್‌ಎಚ್, ಎಎಸ್‌ಎಸ್‌ಎಚ್, ಬಿಎಸ್‌ಎಸ್‌ಎಚ್ ಮತ್ತು ಎಪಿಎಫ್‌ಎಸ್‌ಎಸ್‌ಎಚ್‌ನಂತಹ ವೇದಿಕೆಗಳಲ್ಲಿ ಅವರು 400+ ಆಹ್ವಾನಿತ ಉಪನ್ಯಾಸಗಳನ್ನು ನೀಡಿದ್ದಾರೆ ಮತ್ತು ಹಲವಾರು ಕಾರ್ಯಾಗಾರಗಳನ್ನು ನಡೆಸಿದ್ದಾರೆ, ಪ್ರಪಂಚದಾದ್ಯಂತ ನೂರಾರು ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡಿದ್ದಾರೆ.
ಡಾ. ಭಟ್ ಅವರ ನೇಮಕಾತಿಯು ಕೆಎಂಸಿ ಮಣಿಪಾಲದ ಶೈಕ್ಷಣಿಕ ಮತ್ತು ಕ್ಲಿನಿಕಲ್ ನಾಯಕತ್ವದ ಅನ್ವೇಷಣೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಲಿದೆ.