ಜನವರಿ 15ರೊಳಗೆ ಕಾಮಗಾರಿ ಮುಗಿದರೆ ಸಂಸದ ಕೋಟ ಅವರಿಗೆ ಸನ್ಮಾನಉಡುಪಿ: ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬವನ್ನು ವಿರೋಧಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿ ಇದೇ ಅ. 29ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಇಂದ್ರಾಳಿ ಸೇತುವೆ ಹೋರಾಟ ಸಮಿತಿಯ ಸಂಚಾಲಕ ಅಮೃತ್ ಶೆಣೈ ಹೇಳಿದರು.ಉಡುಪಿಯ ಡಯಾನ ಹೊಟೇಲಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದ್ರಾಳಿ ಸೇತುವೆ ಕಾಮಗಾರಿಯ ಅವ್ಯವಸ್ಥೆಯಿಂದ ಸ್ಥಳೀಯ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಅಪಘಾತಗಳು ಸಂಭವಿಸಿದ್ದು, ಕೆಲವು ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಪ್ರತಿದಿನ ಟ್ರಾಫಿಕ್ ಜಾಮ್ ನಿಂದಾಗಿ ಗಂಟೆ ಗಟ್ಟಲೆ ರಸ್ತೆಯಲ್ಲೇ ಸಮಯ ಕಳೆಯುವ ದುಸ್ಥಿತಿ ಎದುರಾಗಿದೆ. ಸಂಸದರು, ಶಾಸಕರು ಸಾಕಷ್ಟು ಬಾರಿ ಗಡುವು ನೀಡಿದ್ದು, ಕಾಮಗಾರಿ ಮುಗಿಯುವ ಲಕ್ಷಣವಂತೂ ಕಾಣುತ್ತಿಲ್ಲ ಎಂದರು.ಈ ಸಮಸ್ಯೆ ಉಡುಪಿ ಜಿಲ್ಲೆಯ ಎಲ್ಲ ನಾಗರಿಕರ ಸಮಸ್ಯೆ. ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಪ್ರದೇಶಗಳಲ್ಲಿ ಮಸೀದಿ, ರೈಲ್ವೆ ನಿಲ್ದಾಣ, ಪ್ರತಿಷ್ಠಿತ ಎಂಜಿಎಂ ಕಾಲೇಜು ಇದೆ. ಅಲ್ಲಿ ಬರುವ ಜನರಿಗೆ ಅಪಘಾತವಾಗುವ ಭಯದ ವಾತಾವರಣವಿದೆ.ಈ ಸಮಸ್ಯೆಯಿಂದ ನಾಗರಿಕರು ಹೈರಾಣಾಗಿದ್ದು, ಅದಕ್ಕಾಗಿ ಈ ಬಾರಿ ರಾಜಕೀಯ ಪಕ್ಷ, ಸಾಮಾಜಿಕ ಹೋರಾಟಗಾರರು ಸೇರಿ ಸೇತುವೆ ಬಳಿ ಎರಡು ಗಂಟೆ ಪ್ರತಿಭಟನಾ ಸಭೆ ಆಯೋಜಿಸುತ್ತಿದ್ದೇವೆ. ಈ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಜನವರಿ ಅಂತ್ಯದ ಒಳಗೆ ಈ ಸೇತುವೆಯನ್ನು ಜನ ಬಳಕೆಗೆ ಬಿಡಬೇಕು ಎಂಬುವುದು ನಮ್ಮ ಬೇಡಿಕೆ. ರೈಲ್ವೆ ಸಚಿವರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ರೈಲ್ವೆ ಸಮನ್ವಯದ ಕೊರತೆಯಿಂದ ಸಮಸ್ಯೆಯಾಗಿದೆ ಎಂದು ಹೇಳಿದರು.ನಮ್ಮ ಬೇಡಿಕೆ ಕ್ಲಪ್ತ ಸಮಯದಲ್ಲಿ ಈಡೇರದಿದ್ದರೆ ಜನವರಿ 3೦ಕ್ಕೆ ದೊಡ್ಡ ಹೋರಾಟ ಸಂಘಟಿಸಲಾಗುವುದು. ದರಣಿ, ಸಂಸದರ ಮನೆಗೆ ಮುತ್ತಿಗೆ, ರಸ್ತೆ ತಡೆ ಸೇರಿದಂತೆ ಹಲವು ರೀತಿಯಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ. ಅದಕ್ಕಿಂತ ಮುನ್ನ ಸರಕಾರ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಆಗ್ರಹಿಸಿದರು.ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಜನವರಿ15ರೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಆ ಅವಧಿಯೊಳಗೆ ಕಾಮಗಾರಿ ಮುಗಿದರೆ ಸಂಸದ ಕೋಟ ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಜ್ಯೋತಿ ಹೆಬ್ಬಾರ್, ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಉಡುಪಿ,ಜಯನ್ ಮಲ್ಪೆ ಕುಶಾಲ್ ಶೆಟ್ಟಿ, ಅಝೀಝ್ ಉದ್ಯಾವರ, ಕೀರ್ತಿ ಶೆಟ್ಟಿ,ಪೀರ್ ಮುಹಮ್ಮದ್ ಸಾಹೇಬ್, ಸುರೇಶ್ ಶೆಟ್ಟಿ ಬನ್ಬಂಜೆ, ನಗರ ಸಭಾ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಮಹಾಬಲ ಕುಂದರ್, ಚಂದ್ರಮೋಹನ್, ಶ್ರೀಧರ್, ಜನಾಕಿ, ಗಣೇಶ್ ನೇರ್ಗಿ, ಸೃಜನ್ ಶೆಟ್ಟಿ, ಸಜ್ಜನ್ ಶೆಟ್ಟು, ಚಾರ್ಲ್ಸ್ ಅಂಬ್ಲೇರ್, ರಮೇಶ್ ತಿಂಗಳಾಯ, ಸುರೇಂದ್ರ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
previous post
next post