ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ , ಎಣ್ಣೆಹೊಳೆ ಅಂಚೆ ಡೊಂಬರಪಲ್ಕೆ ನಿವಾಸಿಗಳಾದ ಶ್ರೀ ದಿನೇಶ್ ಮತ್ತು ಉಷಾ ದಂಪತಿಯ 10 ವರ್ಷದ ಪುತ್ರಿ ಕುಮಾರಿ ತೃಷಾ ದಿನೇಶ್ ಪೂಜಾರಿ ಇವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು , ತಾಯಿಯೂ ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದು , ತೀರಾ ಬಡ ಕುಟುಂಭದವರಾದ ಇವರ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮತ್ತು ವಿಳಾಸ ತಿದ್ದುಪಡಿ ಮಾಡಬೇಕಾದ ಅಗತ್ಯತೆ ಇತ್ತು.ಆಧಾರ್ ಅಪ್ಡೇಟ್ ಮಾಡಲು ಅಂಚೆ ಕಚೇರಿಗೆ ಭೇಟಿ ನೀಡಿ ಮಾಡಿಸಲು ಅಸಾಧ್ಯವಾಗಿದ್ದು , ಕಾರ್ಕಳ ಪ್ರಧಾನ ಅಂಚೆ ಕಚೇರಿಗೆ ಮಾಹಿತಿಯನ್ನು ತಿಳಿಸಿ ಮನೆಗೆ ತೆರಳಿ ಅಪ್ಡೇಟ್ ಮಾಡಲು ಮನವಿಯನ್ನು ನೀಡಿತ್ತು. ಇವರ ಮನವಿಗೆ ಸ್ಪಂದಿಸಿ ಪುತ್ತೂರು ಅಂಚೆ ವಿಭಾಗದ ಮಾರ್ಕೆಟಿಂಗ್ ತಂಡವು ಮನೆಗೆ ತೆರಳಿ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮತ್ತು ವಿಳಾಸ ತಿದ್ದುಪಡಿಯನ್ನು ಮಾಡಿಸಿಕೊಡಲಾಗಿತ್ತು.ಈ ಬಗ್ಗೆ ಸಾರ್ವಜನಿಕ ರಿಂದ ಅಂಚೆ ಇಲಾಖೆ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.ಈ ಬಗ್ಗೆ ಚಿತ್ರಿಸಿದ್ದ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಅಂಚೆ ಇಲಾಖೆಯ ಅಧಿಕಾರಿಗಳನ್ನು ಪ್ರಶಂಸಿಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಅಂಚೆ ಯೋಜನೆಗಳಿಗೆ ಪೂರಕವಾಗಿ ಅಂಚೆ ಅಧಿಕಾರಿಗಳು ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸವನ್ನು ಈ ರೀತಿ ಮಾಡಿದರೆ ಭಗವಂತನ ಅನುಗ್ರಹದ ಜೊತೆಗೆ ಬಡ ಜನತೆಯ ಆಶೀರ್ವಾದ ಕೂಡಾ ಇರುತ್ತದೆ. ನಿಮಗೆ ಅಭಿನಂದನೆಗಳು” ಎಂದು ಹೇಳಿಕೊಂಡಿದ್ದಾರೆ.