ಉಡುಪಿ-ಕಡಗೋಲು ಕೃಷ್ಣನ ಉಡುಪಿಯಲ್ಲಿ ದೀಪಾವಳಿ ಸಂಭ್ರಮ ಮನೆಮಾಡಿದೆ. ನರಕಚತುರ್ದಶಿಯ ಪ್ರಯುಕ್ತ ಕೃಷ್ಣ ಮಠದಲ್ಲಿ ವಿಶೇಷ ಪೂಜೆಗಳು ಜರುಗಿದವು. ಪರ್ಯಾಯ ಮಠಾಧೀಶರು ಮತ್ತು ಮಠದ ಸಿಬ್ಬಂದಿಗಳು ಜೊತೆಯಾಗಿ ಬೆರೆತು ತೈಲಾಭ್ಯಂಜನ ಮಾಡಿಕೊಳ್ಳೋದು ಈ ದಿನ ದ ವಿಶೇಷ. ಮುಂಜಾನೆಯ ಬೆಳಕಲ್ಲಿ ನಡೆಯುವ ಪಶ್ಚಿಮ ಜಾಗರ ಪೂಜೆ ದೀಪಾವಳಿಯ ಸೊಬಗಿಗೆ ಸಾಕ್ಷಿಯಾಗಿದೆ
ಕಡಗೋಲು ಕೃಷ್ಣ ದೇವರ ಮಠದಲ್ಲಿ ನರಕ ಚತುರ್ದಶಿಯ ಆಚರಣೆ ವಿಶೇಷವಾಗಿತ್ತು. ನರಕಾಸುರನನ್ನು ಕೊಂದ ಬಳಿಕ ಕೃಷ್ಣ ದೇವರು ತೈಲಾಭ್ಯಂಜನ ಮಾಡಿಕೊಂಡರು ಅನ್ನೋದು ಪೌರಾಣಿಕ ಹಿನ್ನೆಲೆ. ಹೀಗಾಗಿ ಉಡುಪಿ ಕೃಷ್ಣನ ಆರಾಧಕರು ಇಂದು ತೈಲಾಭ್ಯಂಜ ಕೈಗೊಳ್ಳುತ್ತಾರೆ. ಕೃಷ್ಣಮಠದಲ್ಲಿ ಮುಂಜಾನೆಯೇ ಸಾವಿರಾರು ಭಕ್ತರು ಪರ್ಯಾಯ ಮಠಾಧೀಶರಿಂದ ತೈಲ ಸ್ವೀಕರಿಸಲು ಸಾಲುಗಟ್ಟಿ ನಿಂತಿದ್ದರು. ಕೃಷ್ಣ ದೇವರ ನೈರ್ಮಲ್ಯ ವಿಸರ್ಜನೆ ನಡೆಸಿದ ಬಳಿಕ ಪರ್ಯಾಯ ಶ್ರೀ ಪುತ್ತಿಗೆ ಮಠದ ಸ್ವಾಮಿಗಳು ಚಂದ್ರಶಾಲೆಯಲ್ಲಿ ಕುಳಿತು ಭಕ್ತರಿಗೆ ತೈಲಪ್ರಸಾದ ನೀಡಿದರು.
ಕೃಷ್ಣಮಠದಲ್ಲಿ ಸಿಬ್ಬಂದಿಗಳು ಭಕ್ತರು ಸ್ವಾಮೀಜಿಗಳ ಜೊತೆ ಸೇರಿ ನರಕ ಚತುರ್ದಶಿ ಆಚರಿಸುತ್ತಾರೆ. ಪರ್ಯಾಯ ಮಠದ ಉಭಯ ಸ್ವಾಮೀಜಿಗಳು ಪರಸ್ಪರ ಎಣ್ಣೆಪೂಸಿಕೊಂಡು ಸಾಂಪ್ರದಾಯಿಕ ತೈಲಾಭ್ಯಂಜನ ಕೈಗೊಂಡರು. ಭಕ್ತರು ಮತ್ತು ಸಿಬ್ಬಂದಿಗಳು ಸ್ವಾಮಿಗಳ ಜೊತೆಗೂಡಿ ಹಬ್ಬ ಆಚರಿಸೋದು ಈ ದಿನದ ವಿಶೇಷ. ತೈಲ ಅಭ್ಯಂಘಕ್ಕೂ ಮುನ್ನ, ಗಂದೋಪಚಾರದ ಮೂಲಕ, ಮಠಾಧೀಶರು ಗೌರವ ವಿನಿಮಯ ಮಾಡಿಕೊಂಡರು. ಬುಧವಾರ ಸಂಜೆ ಅಭ್ಯಂಗಕ್ಕೆ ಬೇಕಾದ ಜಲಪೂರಣ ನಡೆಯಿತು. ಮಠದ ವೈದಿಕರು ಪೂಜೆ ನಡೆಸುವ ಮೂಲಕ, ವಿಧಿ ವಿಧಾನ ನಡೆಸಿಕೊಟ್ಟರು.
ವೇಳೆ ಕಡಗೋಲು ಕೃಷ್ಣನಿಗೆ ಪಶ್ಚಿಮ ಜಾಗರ ಪೂಜೆ ನಡೆಸಲಾಯ್ತು. ನಸುಕಿನ ವೇಳೆ ಗರ್ಭ ಗುಡಿಯ ಸುತ್ತಲೂ ದೀಪ ಹಚ್ಚಿ ಅದರ ಬೆಳಕಿನಲ್ಲೇ ಈ ಪೂಜೆಯನ್ನು ಮಠಾಧೀಶರು ನಡೆಸೋದು ಈ ಪೂಜೆಯ ವಿಶೇಷ.ದೀಪಾವಳಿಯುದ್ದಕ್ಕೂ ವಿವಿಧ ಆಚರಣೆಗಳು ಕೃಷ್ಣಮಠದಲ್ಲಿ ನಡೆಯುತ್ತೆ. ಲಕ್ಷದೀಪೋತ್ಸವದವರೆಗೆ ಪ್ರತಿದಿನವೂ ತುಳಸೀ ಸಂಕೀರ್ತನೆ ನಡೆಸಲಾಗುತ್ತೆ. ಕೃಷ್ಣಮಠದ ದೀಪಾವಳಿ ಆಚರಣೆಯಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಾರೆ.