ಉಡುಪಿ

ಮಗುವಿನ ಮೇಲೆ ದೌರ್ಜನ್ಯ ಎಸಗಿದ ಅರೋಪಿಯಿಂದ ಪೊಲೀಸರ ಮೇಲೆ ಅಟ್ಯಾಕ್

ಉಡುಪಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಪೋಕ್ಸೊ ಆರೋಪಿಯೋರ್ವ ರವಿವಾರ ಸ್ಥಳ ಮಹಜರು ಸಂದರ್ಭ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿರುವ ಬಗ್ಗೆ ವರದಿಯಾಗಿದೆ.
ಈ ವೇಳೆ ಪೊಲೀಸರು ಲಾಠಿಯಿಂದ ಎರಡು ಕಾಲುಗಳಿಗೆ ಏಟು ಕೊಟ್ಟು ಆರೋಪಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎನ್ನಲಾಗಿದೆ.

ಹಲ್ಲೆಗೆ ಒಳಗಾಗಿರುವ ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿ ರಿತೇಶ್ ಹಾಗೂ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡಿರುವ ಪೊಕ್ಸೋ ಆರೋಪಿ ಉತ್ತರ ಪ್ರದೇಶ ಮೂಲದ ಮಣಿಪಾಲ ವಿ.ಪಿ.ನಗರದ ನಿವಾಸಿ ಮುಹಮ್ಮದ್ ದಾನಿಶ್(29)ನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಒಳರೋಗಿಗಳಾಗಿ ದಾಖಲಿಸಲಾಗಿದೆ.

ಉಡುಪಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ್, ಡಿವೈಎಸ್ಪಿ ಪ್ರಭು ಡಿ.ಟಿ., ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್ ಹಾಜರಿದ್ದರು.

ಸೇಡಿಗಾಗಿ ಮಗುವಿಗೆ ದೌರ್ಜನ್ಯ:-

ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಹರಿರಾಂ ಶಂಕರ್, ಜು.8ರಂದು ಎಂಟು ವರ್ಷ ಪ್ರಾಯದ ಬಾಲಕಿಯ ಮೇಲೆ ಆರೋಪಿಗಳು ಮಣಿಪಾಲದ ಟ್ಯಾಪ್ಮಿ ರಸ್ತೆಯ ಹಾಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಜು.11ರಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳಾದ ಉತ್ತರ ಪ್ರದೇಶ ಮೂಲದ ದಾನಿಶ್, ಶಾಮಿ, ಮೌಸೀನ್ ಹಾಗೂ ಅಬಿದಾ ಎಂಬವರನ್ನು ಪೊಲೀಸರು ಜು.12ರಂದು ಬಂಧಿಸಿರುವುದಾಗಿ ತಿಳಿಸಿದರು.
ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು, ಪ್ರಮುಖ ಆರೋಪಿ ದಾನಿಶ್ ನನ್ನು ಮಹಜರು ನಡೆಸಲು ಘಟನಾ ಸ್ಥಳ ಮಣಿಪಾಲ ತಾಂಗೋಡು ಎರಡನೇ ಕ್ರಾಸ್‌ನ ಹಾಡಿ ಬಳಿ ಪೊಲೀಸರು ಕರೆದು ಕೊಂಡು ಹೋಗಿದ್ದರು. ಸ್ಥಳವನ್ನು ಪಂಚನಾಮೆ ಮಾಡುವ ವೇಳೆ ದಾನಿಶ್, ಆತನಿಗೆ ಕೈಕೊಳ ಹಿಡಿದು ಕೊಂಡಿದ್ದ ಸಿಬ್ಬಂದಿ ರಿತೇಶ್ ಎದೆಗೆ ಕೈಗಳಿಂದ ಗುದ್ದಿ ದೂಡಿ ನೆಲಕ್ಕೆ ಬೀಳಿಸಿ, ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿಹಾಕಲು ಯತ್ನಿಸಿದ್ದು, ಈ ವೇಳೆ ಪೊಲೀಸ್ ನಿರೀಕ್ಷಕರ ರಾಮಚಂದ್ರ ನಾಯಕ್ ತಡೆದಿದ್ದು, ಅವರ ಮೇಲು ಹಲ್ಲೆ ನಡೆಸಲು ಮುಂದಾದನು. ಆ ಸಂದರ್ಭ ಲಾಠಿಯಿಂದ ಆತನ ಕಾಲಿಗೆ ಹೊಡೆದು ನಿಯಂತ್ರಿಸಲಾಯಿತು. ಬಳಿಕ ಉಳಿದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡರು ಎಂದು ಅವರು ತಿಳಿಸಿದ್ದಾರೆ.
ಅಬಿದಾ ತನ್ನ ಸಂಬಂಧಿ ಜೊತೆಗಿನ ವೈಯಕ್ತಿಕ ದ್ವೇಷಕ್ಕೆ ಸೇಡು ತೀರಿಸಿಕೊಳ್ಳಲು ಆರೋಪಿಗಳ ಮೂಲಕ ಮಗುವಿಗೆ ಲೈಂಗಿಕ ದೌರ್ಜನ್ಯ ಎಸಗುವಂತೆ ಮಾಡಿದ್ದಾರೆ. ಆರೋಪಿ ಅಬಿದಾ ಮತ್ತು ದಾನಿಶ್ ಮಧ್ಯೆ ಅಕ್ರಮ ಸಂಬಂಧ ಇತ್ತು. ಈ ಸಂಬಂಧ ಮಗುವಿನ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದು ಗಂಭೀರ ಪ್ರಕರಣವಾಗಿರುವುದರಿಂದ ಎಲ್ಲ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.

‘ಪೊಕ್ಸೋ ಪ್ರಕರಣದ ಉಳಿದ ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದಾನಿಶ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗುವುದು’

Related posts

ಅಪ್ರೆಂಟಿಸ್ ತರಬೇತಿ: ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ

Udupilive News

ಉಡುಪಿಯಲ್ಲಿ ಶ್ಯೇನ ದೃಷ್ಟಿ ಕೇಂದ್ರಕ್ಕೆ ಚಾಲನೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್.

Udupilive News

ಕುಂದಾಪುರ: ಸಮುದ್ರದಲ್ಲಿ ಈಜಲು ತೆರಳಿದ ಇಬ್ಬರು ಸಮುದ್ರಪಾಲು

Udupilive News

Leave a Comment