ಉಡುಪಿ ಡಾ| ಟಿಎಂಎ ಪೈ ಶಿಕ್ಷಣ ಮಹಾ ವಿದ್ಯಾಲಯದ ೧೯೮೦-೮೧ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಮಾಧವ ಮಂದಿರ ಸಭಾಂಗಣದಲ್ಲಿ ಜರಗಿತು.
ಸಭಾಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಕೋ-ಆರ್ಡಿನೇಟರ್ ಡಾ| ಮಹಾಬಲೇಶ್ವರ ರಾವ್ ಅವರು ಮಾತನಾಡಿ, ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆ ಮತ್ತು ಸಹಪಾಠಿಗಳಲ್ಲಿ ಇಟ್ಟಿರುವ ಪ್ರೀತ್ಯಾಧಾರಗಳೇ ಪುನರ್ ಮಿಲನ ಕಾರ್ಯಕ್ರಮಕ್ಕೆ ಪ್ರೇರಣೆ. ತಾವು ಕಲಿತ ಸಂಸ್ಥೆಗೆ ನೀವು ನೀಡುತ್ತಿರುವ ದತ್ತಿನಿಧಿ ದೇಣಿಗೆ ಇಂದಿನ ಕಾರ್ಯಕ್ರಮದ ಸವಿನೆನಪನ್ನು ಶಾಶ್ವತವಾಗಿ ಕಾಯ್ದಿರಿಸುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಡಾ| ಮಹಾಬಲೇಶ್ವರ ಹೆಬ್ಬಾರ್ ಮತ್ತು ಪ್ರೋ. ಬಿ.ಕೆ ಶ್ರೀಧರ್ ರಾವ್ ಇವರನ್ನು ಅಭಿನಂದಿಸಲಾಯಿತು. ಪ್ರಸ್ತುತ ಕೀರ್ತಿ ಶೇಷರಾಗಿರುವ ಉಪನ್ಯಾಸಕರುಗಳಾದ ಪ್ರೋ. ಕೆ.ಆರ್ ಹಂದೆ, ಪ್ರೋ. ಕೆ ವಿಶ್ವನಾಥ್, ಪ್ರೋ ಬಿ.ಎಲ್ ಶಂಕರನಾರಾಯಣ, ಎ ಸುಬ್ರಹ್ಮಣ್ಯ ಉಪಾಧ್ಯ, ಕೆ.ಆರ್ ಕಾರಂತ ಇವರುಗಳಿಗೆ ಹಾಗೂ ನಿಧನ ಹೊಂದಿರುವ ಸಹಪಾಠಿಗಳಿಗೆ ನುಡಿನಮನ ಸಲ್ಲಿಸಲಾಯಿತು.
ಪುನರ್ ಮಿಲನ ಕಾರ್ಯಕ್ರಮದ ನೆನಪಿಗಾಗಿ ಹಳೆ ವಿದ್ಯಾರ್ಥಿಗಳು ೧.೦೫ ಲಕ್ಷ ರೂ ನಗದನ್ನು ದತ್ತಿನಿಧಿಯಾಗಿ ನೀಡಿದ್ದು ಈ ಕೊಡುಗೆಯನ್ನು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ೪೪ ವರ್ಷಗಳ ಬಳಿಕ ಮತ್ತೆ ಭೇಟಿಯಾದ ಸಹಪಾಠಿಗಳು ಪರಸ್ಪರ ಪರಿಚಯಿಸಿಕೊಂಡು ವಿವಿಧ ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಪಟ್ಟರು.
ಆ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಬಸ್ರೂರು ಸುಭಾಸ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಶ್ರೀಧರ ರೈ ಪುತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಡೆಕಾರು ಶೇಖರ ಅಂಚನ್ ಸಭಾಧ್ಯಕ್ಷರನ್ನು ಪರಿಚಯಿಸಿದರು, ವಸಂತಿ ಬಾಯಿ ಮತ್ತು ಪದ್ಮನಾಭ ಬಂಡಿ ಇವರು ಗುರುವಂದನೆ ಸ್ವೀಕರಿಸಿದ ಗುರುಗಳ ಪರಿಚಯ ಮಾಡಿದರು. ಕೆ. ಬಾಲಕೃಷ್ಣ ಶೆಟ್ಟಿ ನುಡಿ ನಮನ ಸಲ್ಲಿಸಿದರು. ಪುರುಷೋತ್ತಮ ಕಿರ್ಲಾಯ ಧನ್ಯವಾದ ಸಮರ್ಪಿಸಿದರು. ಬಾಲಕೃಷ್ಣ ಶೆಟ್ಟಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು