ಉಡುಪಿ: ಉಡುಪಿಯಿಂದ ಕೇರಳಕ್ಕೆ ಸಾಗುವ ವಿದ್ಯುತ್ ಪ್ರಸರಣದ ತಂತಿ ಅಳವಡಿಕೆ ಕಾಮಗಾರಿಯನ್ನು ರೈತರಿಗೆ ತೊಂದರೆಯಾಗದಂತೆ ನಿರ್ವಹಿಸಲು ಸಂಬಂಧಿತರಿಗೆ ಸೂಚಿಸುವುದಾಗಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಉಡುಪಿ- ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗ (ಯುಕೆಟಿಎಲ್) ವಿರೋಧಿ ಸಮಿತಿಯ ಪದಾಧಿಕಾರಿಗಳು ಭಾನುವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ, ಯೋಜನೆಗೆ ತಮ್ಮ ವಿರೋಧ ಇಲ್ಲ. ಆದರೆ, ರೈತರ ಕೃಷಿಯನ್ನು ಹಾಳುಗೆಡಹಿ ತಂತಿ ಅಳವಡಿಕೆಗೆ ನಮ್ಮ ತೀವ್ರ ವಿರೋಧವಿದೆ. ಯಾವುದೇ ಕಾರಣಕ್ಕೂ ಕೃಷಿ ಭೂಮಿ ಹಾಗೂ ಕೃಷಿ ಸಂಪತ್ತು ನಾಶಗೊಳಿಸಿ ಯೋಜನೆ ಅನುಷ್ಠಾನಗೊಳಿಸಲು ಬಿಡುವುದಿಲ್ಲ. ಅದರ ಬದಲು ಪರ್ಯಾಯ ಮಾರ್ಗ ಹುಡುಕಿ ಯೋಜನೆ ಜಾರಿಯಾಗಲಿ ಎಂದು ಆಗ್ರಹಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠರು ಮತ್ತು ಸಂಬಂಧಿತ ಇತರ ಇಲಾಖಾಧಿಕಾರಿಗಳು ಹಾಗೂ ಭೂಮಾಲಕರು, ಹೋರಾಟ ಸಮಿತಿ ಪ್ರಮುಖರು, ಸಮಾನ ಮನಸ್ಕ ರೈತ ಪರ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಿ ಕೂಡಲೇ ಸಭೆ ನಡೆಸಿ ಸ್ಪಷ್ಟ ತೀರ್ಮಾನಕ್ಕೆ ಬರಬೇಕು. ಯೋಜನೆ ಅನುಷ್ಠಾನಕ್ಕೆ ಮೊದಲು ಅನುಸರಿಸಲೇಬೇಕಾದ ಕೇಂದ್ರ ಇಂಧನ ಸಚಿವಾಲಯ ಮತ್ತು ಕರ್ನಾಟಕ ಸರಕಾರದ ಪರಿಷ್ಕೃತ ಮಾರ್ಗಸೂಚಿಯಂತೆಯೇ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿಗೆ ಸಕಾರಾತ್ಮಕವಾಗಿ ಸಂದಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆದಷ್ಟು ಶೀಘ್ರದಲ್ಲಿ ಉಭಯ ಜಿಲ್ಲಾ ಮಟ್ಟದ ಸಭೆ ನಡೆಸಲು ಕ್ರಮ ಕೈಗೊಳ್ಳುವಂತೆ ಹಾಗೂ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸಂಬಂಧಿತ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಇದ್ದರು.
ಈ ಸಂದರ್ಭದಲ್ಲಿ ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ವಿಟ್ಲ ವಿದ್ಯುತ್ ಮಾರ್ಗ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಇನ್ನಾ ಗ್ರಾಮದ ವಿದ್ಯುತ್ ಮಾರ್ಗ ಹೋರಾಟ ಸಮಿತಿ ಅಧ್ಯಕ್ಷ ಅಮರನಾಥ ಶೆಟ್ಟಿ, ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಮಂಗಳೂರು ತಾಲೂಕು ರೈತ ಸಂಘ ಅಧ್ಯಕ್ಷ ದಯಾನಂದ ಶೆಟ್ಟಿ ಕುಪ್ಪೆಪದವು, ರೈತ ಮುಖಂಡ ಉದಯ ಕುಮಾರ್ ಜೈನ್, ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ’ಸೋಜ ಮತ್ತು ಸಂಚಾಲಕ ಕಿರಣ್ ಮಂಜನಬೈಲು, ಸಂತ್ರಸ್ತ ರೈತರಾದ ಇಸ್ಮಾಯಿಲ್, ರೇಶ್ಮಾ ಶೆಟ್ಟಿ ಇನ್ನ, ಅಣ್ಣು ಗೌಡ, ರಾಬರ್ಟ್, ಸಂಜೀವ ಗೌಡ ಮಂಜಲಾಡಿ, ಲಕ್ಷ್ಮೀನಾರಾಯಣ, ಫ್ರಾನ್ಸಿಸ್ ನೊರೊನ್ಹಾ ಮತ್ತು ಸಂಜೀವ ಗೌಡ ಮಂಜನಬೈಲು, ದಯಾನಂದ ಶೆಟ್ಟಿ, ರಾಜೀವ ಗೌಡ, ಉದಯ ಕುಮಾರ್, ಅಮರನಾಥ್ ಶೆಟ್ಟಿ, ಅಶೋಕ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿಗಾರ್, ಹರೀಶ್ ಕುಮಾರ್, ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ಮೊದಲಾದವರಿದ್ದರು.