ಉಡುಪಿ: ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ, ಅನಿವಾಸಿ ಭಾರತೀಯ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಪಾರ್ಚೂನ್ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧಿಸಲ್ಪಟ್ಟಿದ್ದ ಆರೋಪಿ ಬಾರ್ಕೂರು ಮೂಲದ ನಾಗೇಶ್ ಪೂಜಾರಿ (31) ಜಾಮೀನು ತಿರಸ್ಕರಿಸಿ ಬ್ರಹ್ಮಾವರ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜೀತು ಆರ್.ಎಸ್. ಅವರು ಆದೇಶಿಸಿದ್ದಾರೆ.
ಆರೋಪಿಗೆ ಬ್ರಹ್ಮಾವರ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಜಾಮೀನು ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ಧುಗೊಳಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಡುಪಿ ಸೆನ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ 3 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದು ಬಳಿಕ ಅ.16 ರಂದು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದ್ದು ಜಾಮೀನು ಅರ್ಜಿ ಮೇಲಿನ ಆದೇಶವನ್ನು ಅ.21 ಸೋಮವಾರಕ್ಕೆ ನಿಗದಿಪಡಿಸಿದ್ದರು.
ಆರೋಪಿಯು ನೈಜ್ಯ ಮಾಹಿತಿಗಳನ್ನು ಮುಚ್ಚಿಟ್ಟು ನ್ಯಾಯಾಲಯದಲ್ಲಿ ಜಾಮೀನು ಪಡೆದಿರುವುದು, ತನಿಖೆಗೆ ಅಸಹಕಾರ, ತಲೆ ಮರೆಸಿಕೊಂಡಿರುವ ವಿಚಾರದ ಬಗ್ಗೆ ನ್ಯಾಯಾಲಯದಲ್ಲಿ ಸುಧೀರ್ಘವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಮಂಗಳೂರು ವಲಯದ ಕಾನೂನು ಅಧಿಕಾರಿ (ಹಿರಿಯ) ಶಿವಪ್ರಸಾದ್ ಆಳ್ವ ವಾದ ಮಂಡಿಸಿದ್ದರು. ಬ್ರಹ್ಮಾವರ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಆರೋಪಿ ಮೊದಲು ಸಲ್ಲಿಸಿದ ಜಾಮೀನು ಅರ್ಜಿಯನ್ನು ಮರುವಿಮರ್ಷೆಗೆ ಒಳಡಿಸಲು ಹೈಕೋರ್ಟ್ ಸ್ಪಷ್ಟವಾಗಿ ಸೂಚಿಸಿದ್ದರೂ ಕೂಡ ಹೊಸ ಜಾಮೀನು ಅರ್ಜಿ ಸಲ್ಲಿಸಿದ ಬಗ್ಗೆಯೂ ಸರಕಾರಿ ಅಭಿಯೋಜಕರು ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಆಕ್ಷೇಪ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ತಿರಸ್ಕೃತಗೊಳಿಸಿ ಆದೇಶ ಪ್ರಕಟಿಸಿದ್ದಾರೆ.