ಉಡುಪಿ : ಪೆರ್ಡೂರಿನ ಸಾರ್ವಜನಿಕ ಸ್ಥಳದಲ್ಲಿ 5 ತಿಂಗಳ ಹಿಂದೆ ಕಬ್ಬಿಣದ ರಾಡ್ ಹಿಡಿದು ತಿರುಗಾಡುತ್ತಾ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸ್ಥಳೀಯರ ಸಹಾಯದಿಂದ ವಶಕ್ಕೆ ಪಡೆದು ಮಂಜೇಶ್ವರದ ದೈಗುಳಿಯಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದು, ಇದೀಗ ವ್ಯಕ್ತಿ ಗುಣಮುಖರಾಗಿ ತನ್ನ ಕುಟುಂಬವನ್ನು ಸೇರಲು ಹಂಬಲಿಸುತ್ತಿದ್ದಾರೆ.
ವ್ಯಕ್ತಿಯ ಹೆಸರು ಆನಂದ (48) ಎಂದಾಗಿದ್ದು, ತನ್ನ ಸಂಬಂಧಿಕರು ಪೆರ್ಡೂರು ಶಿವಪುರ ಪರಿಸರದಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ವ್ಯಕ್ತಿ ಸಹಜ ಸ್ಟಿತಿಗೆ ಬಂದಿರುವುದರಿಂದ ಅವರನ್ನು ಆಶ್ರಮದಿಂದ ಬಿಡುಗಡೆಗೊಳಿಸುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಸಂಬಂಧಿಕರು ತುರ್ತಾಗಿ ಆಶ್ರಮ ಅಥವಾ ತನ್ನನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
ಆನಂದ ಅವರು ಮಾನಸಿಕ ಕ್ಷೋಭೆಗೆ ಒಳಗಾಗಿ
ದೂಪದಕಟ್ಟೆ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಹಗಲು ತಿರುಗಾಡುತ್ತಾ ಆತಂಕ ಸೃಷ್ಟಿಸಿದ್ದರು.. ಈ ಬಗ್ಗೆ ಸ್ಥಳೀಯರು ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದ್ದರು. ವಿಶು ಶೆಟ್ಟಿ ಅವರು ಸ್ಥಳೀಯರಾದ ಸತೀಶ್ ಆಚಾರ್ಯ ಮತ್ತಿತರರ ನೆರವಿನೊಂದಿಗೆ ವ್ಯಕ್ತಿಯನ್ನು ವಶಕ್ಕೆ ಪಡೆದು ಕಳೆದ ಮೇ ತಿಂಗಳಲ್ಲಿ ಮಂಜೇಶ್ವರದ ದೈಗುಳಿ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದರು
. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗಿತ್ತು.
ಸುಮಾರು 5 ತಿಂಗಳ ಕಾಲ ಆಶ್ರಮದ ಡಾ.ಉದಯ ಕುಮಾರ್ ದಂಪತಿಯ ಚಿಕಿತ್ಸೆ ಹಾಗೂ ಆರೈಕೆಯಿಂದ ವ್ಯಕ್ತಿ ಚೇತರಿಸಿಕೊಂಡು ಇದೀಗ ತನ್ನ ಸಂಬಂಧಿಕರನ್ನು ಸೇರಲು ಉತ್ಸುಕರಾಗಿದ್ದಾರೆ.
ಆನಂದ ಅವರಿಗೆ ಪುನರ್ಜನ್ಮ ನೀಡಿದ ಆಶ್ರಮದ ಡಾ.ಉದಯ ಕುಮಾರ್ ದಂಪತಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.